ಮ್ಯಾಗ್ನಸೈಟ್
ಮೆಗ್ನೀಸಿಯಮ್ ಕಾರ್ಬೊನೇಟಿನ (ಒgಅಔ3) ಖನಿಜ ರೂಪ. ಶುದ್ಧ ಸ್ಥಿತಿಯಲ್ಲಿ ಇದು 47.6% ರಷ್ಟು ಮೆಗ್ನಿಸಿಯಮ್ ಮತ್ತು 52.4% ರಷ್ಟು ಕಾರ್ಬನ್ ಡೈಆಕ್ಸೈಡ್‍ಗಳಿಂದ ಕೂಡಿದೆ. ಸಾಮಾನ್ಯವಾಗಿ ಅಲ್ಪ ಪ್ರಮಾಣದಲ್ಲಿ ಕಬ್ಬಿಣದ ಕಾರ್ಬೋನೇಟಿನ ಜೊತೆಗೂಡಿರುತ್ತದೆ,

ಮ್ಯಾಗ್ಯಸೈಟ್ ಖನಿಜ ಷಷ್ಟಭುಜಿ (ಹೆಕ್ಸಾಗೋನಲ್) ವ್ಯವಸ್ಥೆಯಲ್ಲಿ ಸ್ಫಟಿಕೀಕರಿಸುತ್ತದೆ ಹಾಗೂ ರಾಂಬೊಹೀಡ್ರಲ್ ಸೀಳುಗಳನ್ನು ಒಳಗೊಂಡಿರುತ್ತದೆ. ಮ್ಯಾಗ್ನಸೈಟ್‍ನಲ್ಲಿ ಏಕಸ್ಫಟಿಕವಿರುವುದು ವಿರಳ. ಅದು ಹೆಚ್ಚಾಗಿ ಮುದ್ದೆಯಾಕಾರದಲ್ಲಿ ದೊರೆಯುತ್ತದೆ. ಸಾಮಾನ್ಯವಾಗಿ ಅಸ್ಫಟಿಕಸ್ಥಿತಿಯೇ ಹೆಚ್ಚು. ಮ್ಯಾಗ್ನಸೈಟ್ ಖನಿಜ ಅಮೃತಶಿಲೆ ಅಥವಾ ದಪ್ಪ ಕಣದ ಡಾಲೊಮೈಟನ್ನು ಹೋಲುತ್ತದೆ. ಇದಕ್ಕೆ ದಟ್ಟ ಪೊರ್ಸಿಲೇನ್ ಮಾದರಿಯ ಒಳರಚನೆಯೂ ಶಂಖ್ವಾಕೃತಿಯ ಬಿರಿತವೂ ಇವೆ. ಖನಿಜವನ್ನು ಒಡೆದಾಗ, ಒಳಗೆ ಬಾಗಿದ ಇಲ್ಲವೆ ಹೊರಗೆ ಉಬ್ಬಿದ ಮೈಯನ್ನು ಪ್ರದರ್ಶಿಸುತ್ತದೆ. ಮ್ಯಾಗ್ನಸೈಟ್ ಸ್ಫಟಿಕಸ್ಥಿತಿಯಲ್ಲಿ ಸಣ್ಣ ಸಣ್ಣ ಹರಳುಗಳಿಂದ ಕೂಡಿರಬಹುದು. ಹರಳುಗಳು ದೊಡ್ಡವಾಗಿಯೂ ಇರಬಹುದು. ಇವುಗಳ ಬಣ್ಣ ಬಿಳಿಯಿಂದ ಹಳದಿ, ನೀಲಿ ಮತ್ತು ಕೆಂಪು ಇತ್ಯಾದಿ ಬಣ್ಣಗಳವರೆಗೂ ಬದಲಾಗುವುದು. ಸಾಮಾನ್ಯವಾಗಿ ಮುದ್ದೆ ರೂಪದ ಈ ಖನಿಜದ ಬಣ್ಣ ಬಿಳಿ ಇಲ್ಲವೆ ಬೂದು, ಸಾಪೇಕ್ಷಸಾಂದ್ರತೆ 2.9-3.1; ಕಾಠಿಣ್ಯಾಂಕ 3.5-4.5.
ಮ್ಯಾಗ್ನಸೈಟ್ ಶುದ್ಧಸ್ಥಿತಿಯಲ್ಲಿ ದೊರೆಯುವುದು ಬಲು ವಿರಳ. ಸಾಮಾನ್ಯವಾಗಿ ಈ ಖನಿಜದಲ್ಲಿ ಅಲ್ಯುಮಿನ ಮತ್ತು ಕಬ್ಬಿಣದ ಆಕ್ಸೈಡುಗಳು ಕೂಡಿರುತ್ತವೆ. ಅಗ್ನಿಶಿಲೆಗಳ ಅಂತಸ್ಸರಣದಲ್ಲಿ, ಅವುಗಳಲ್ಲಿಯ ಡಾಲೊಮೈಟ್ ಮತ್ತು ಸುಣ್ಣ ಶಿಲೆಗಳ ವಿನಿಮಯದಿಂದ ಮ್ಯಾಗ್ನಸೈಟ್ ರೂಪುಗೊಳ್ಳುತ್ತದೆ. ಈ ನಿಕ್ಷೇಪಗಳಿಗೆ ಉದಾಹರಣೆಗಳು ಆಸ್ಟ್ರಿಯ, ಹಂಗರಿ, ಹಿಂದಿನ ಸೋವಿಯೆತ್ ರಷ್ಯದ ಯೂರಲ್ ಪರ್ವತ ಪ್ರದೇಶ ಇತ್ಯಾದಿ. 1966ರಲ್ಲಿ ಪಶ್ಚಿಮ ಯುರೋಪಿನ ಆಸ್ಟ್ರಿಯ ಮ್ಯಾಗ್ನಸೈಟಿನ ಉತ್ಪಾದನೆಯಲ್ಲಿ ಮುಖ್ಯ ಸ್ಥಾನಗಳಿಸಿತ್ತು. ಯೂಗೋಸ್ಲಾವಿಯ, ಗ್ರೀಸ್, ಚೆಕೊಸ್ಲೋವಾಕಿಯಾ ಮತ್ತು ತುರ್ಕಿ ಮ್ಯಾಗ್ನಸೈಟನ್ನು ಉತ್ಪಾದಿಸುತ್ತಿದ್ದುವು. ಕ್ರಮೇಣ ಉತ್ಪಾದನೆ ಇಳಿಮುಖವಾಯಿತು. ಹಿಂದಿನ ಸೋವಿಯೆತ್ ರಷ್ಯದಲ್ಲಿ ಟ್ರಾನ್ಸ್-ಸೈಬೀರಿಯನ್ ರೈಲುಹಳಿಗಳ ಸಮೀಪದ ಸಯಾನ ಪರ್ವತದ ಪೂರ್ವಭಾಗದ ತಪ್ಪಲುಗಳಲ್ಲಿ ಮ್ಯಾಗ್ನಸೈಟ್ ನಿಕ್ಷೇಪಗಳು ಪತ್ತೆಯಾಗಿವೆ. ದೊಡ್ಡ ಮ್ಯಾಗ್ನಸೈಟ್ ನಿಕ್ಷೇಪವೊಂದು ಯೂರಲ್ ಪರ್ವತಗಳಲ್ಲಿ ದೊರೆತಿದೆ. ಚೀನದಲ್ಲಿ ನಿಹಿನ್‍ಷಾನ್ ಸಮೀಪದ ಮಂಚೂರಿಯದಲ್ಲಿ ದೊಡ್ಡ ನಿಕ್ಷೇಪಗಳಿವೆ. ಮಂಚೂರಿಯದಲ್ಲಿ ಮ್ಯಾಗ್ನಸೈಟ್ ನಿಕ್ಷೇಪ ಸುಮಾರು 14 ಕಿಮೀ ಉದ್ದವಿದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ ವಾಷಿಂಗ್‍ಟನ್ನಿನ ಷಿವಾಲ್ಹಾ ಎಂಬಲ್ಲಿ ಅತಿ ದೊಡ್ಡ ನಿಕ್ಷೇಪಗಳಿವೆ. ಇಲ್ಲಿಯ ಮ್ಯಾಗ್ನಸೈಟ್ ಖನಿಜ ಡಾಲೋಮೈಟ್ ಜೊತೆಗೂಡಿದೆ. ಕ್ಯಾಲಿಫೋರ್ನಿಯದ ಕರಾವಳಿ ಉದ್ದಕ್ಕೂ ಇರುವ ಸರ್ಪೆಂಟೀನ್‍ಗಳಲ್ಲಿ ಮ್ಯಾಗ್ನಸೈಟ್ ನಿಕ್ಷೇಪಗಳಿವೆ.
ಭಾರತದಲ್ಲಿ ಅತಿ ದೊಡ್ಡ ಮತ್ತು ಅತ್ಯಂತ ಪ್ರಮುಖವಾದ ಮ್ಯಾಗ್ನಸೈಟ್ ನಿಕ್ಷೇಪಗಳು ತಮಿಳು ನಾಡಿನ ಸೇಲಮ್ ಜಿಲ್ಲೆಯಲ್ಲಿವೆ. ಕರ್ನಾಟಕದ ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸಣ್ಣ ಪುಟ್ಟ ನಿಕ್ಷೇಪಗಳಿವೆ. ಉತ್ತರ ಪ್ರದೇಶದ ಅಲ್ಮೋರಾ ಜಿಲ್ಲೆಯಲ್ಲಿ ಮ್ಯಾಗ್ನಸೈಟ್ ನಿಕ್ಷೇಪಗಳು ಪತ್ತೆಯಾಗಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಅಸ್ಫಟಿಕರೂಪದ, ಮುದ್ದೆಯಾಕಾರದ ಮ್ಯಾಗ್ನಸೈಟಿನಲ್ಲಿ ಸೀಳುಗಳಿರುವುದಿಲ್ಲ. ಇದು ಸೂಕ್ಷ್ಮ ಕಣಗಳಿಂದ ಕೂಡಿದ್ದು, ದಟ್ಟವಾಗಿರುವುದು. ಇದನ್ನು ಒಡೆದಾಗ ಆ ಭಾಗದ ಬಣ್ಣ ಸ್ವಚ್ಛ ಬಿಳಿಯಾಗಿರುತ್ತದೆ. ಕೆಲವು ಕಶ್ಮಲಗಳಿಂದಲೂ ಕೂಡಿ ಇತರ ಬಣ್ಣಗಳಿಂದ ಮಿಶ್ರಿತವಾಗಿರುವುದುಂಟು. ಮ್ಯಾಗ್ನಸೈಟ್ ಖನಿಜ, ಸ್ಫಟಿಕ ರೂಪದ್ದಕ್ಕಿಂತಲೂ ಶುದ್ಧ. ಇದರಲ್ಲಿ ಅಷ್ಟಾಗಿ ಕಬ್ಬಿಣ ಆಕ್ಸೈಡ್ ಇರುವುದಿಲ್ಲ. ಈ ಖನಿಜ ಅತಿಕ್ಷಾರಶಿಲೆಗಳ(ಅಲ್ಟ್ರಬೇಸಿಕ್ ರಾಕ್ಸ್) ಶಿಥಿಲೀಕರಣದಿಂದ ರೂಪಾಂತರ ಹೊಂದಿದ ಸರ್ಪೆಂಟೀನ ಖನಿಜದ ಮೇಲೆ ಆದ ರಾಸಾಯನಿಕ ಕ್ರಿಯೆಗಳಿಂದ ಉತ್ಪತ್ತಿಯಾಗುತ್ತದೆ. ಮ್ಯಾಗ್ನಸೈಟ್‍ನ ಜೊತೆಗೆ ಸಿಲಿಕದ ಮಾದರಿಗಳಾದ ಓಸಾಲ್ ಅಥವಾ ಚಾಲ್ಸಿಡೋನಿ ಮುಂತಾದವು ಬೆರೆತಿರಬಹುದು. ಇಂಥ ಖನಿಜ ನಿಕ್ಷೇಪಗಳು ಮೈಸೂರಿನ ಸಮೀಪದ ದೊಡ್ಡಕಾಣ್ಯ ಮತ್ತು ಸೇಲಮ್ ಬಳಿ ಇರುವ ಯರಕಾಡಿನಲ್ಲಿ ಸಿಗುತ್ತವೆ. ಈ ಪ್ರದೇಶಗಳಲ್ಲಿ ರೂಪಾಂತರಗೊಂಡ ಸರ್ಪೆಂಟೀನ್ ಅಥವಾ ಶಿಥಿಲಗೊಂಡ ಮೂಲಕ್ಷಾರಶಿಲೆಗಳಲ್ಲಿ ಸಿರಗಳು ನಾನಾ ರೀತಿಯಲ್ಲಿ ಒಂದನ್ನೊಂದು ಹೆಣೆದುಕೊಂಡಿರುವುದು ಕಂಡಬರುತ್ತದೆ.

ಗುಣಗಳು : ಮ್ಯಾಗ್ನಸೈಟನ್ನು ಸುಟ್ಟಾಗ ಅದು ಕ್ಯಾಲ್ಸೈಟ್ ಮತ್ತು ಡಾಲೊಮೈಟುಗಳಂತೆ ತನ್ನಲ್ಲಿರುವ ಕಾರ್ಬನ್ ಡೈ ಆಕ್ಸೈಡನ್ನು ಕಳೆದುಕೊಳ್ಳುತ್ತದೆ. ಸುಮಾರು 8000-12000ಅ ಉಷ್ಣತೆಯಲ್ಲಿ ಇದನ್ನು ಸುಟ್ಟಾಗ 95%-98% ಕಾರ್ಬನ್ ಡೈ ಅಕ್ಸೈಡ್ ನಷ್ಟವಾಗುತ್ತದೆ.  ಈ ಸ್ಥಿತಿಯಲ್ಲಿರುವ ಮ್ಯಾಗ್ನಸೈಟಿಗೆ ಕ್ಷಾರ ಮೆಗ್ನಿಸಿಯ (ಕಾಸ್ಟಿಕ್ ಮೆಗ್ನಿಸಿಯ) ಅಥವಾ ಸುಟ್ಟ ಮ್ಯಾಗ್ನಸೈಟ್ (ಕ್ಯಾಲ್‍ಸೈನ್ಡ್ ಮ್ಯಾಗ್ನಸೈಟ್) ಎಂದು ಹೆಸರು. 14500-17500ಅ ಉಷ್ಣತೆಯಲ್ಲಿ ಸುಟ್ಟಾಗ, ಸುಮಾರು 0.5% ರಷ್ಟು ಮಾತ್ರ ಉಳಿದು, ಉಳಿದ ಕಾರ್ಬನ್ ಡೈ ಆಕ್ಸೈಡ್ ನಷ್ಟವಾಗುತ್ತದೆ. ಈ ರೀತಿ ಉತ್ಪತ್ತಿಯಾದ, ರಿಫ್ರ್ಯಾಕ್ಟೋರಿ ಮೆಗ್ನೀಸಿಯವನ್ನು ಸಂಪೂರ್ಣವಾಗಿ ಸುಟ್ಟ ಮೆಗ್ನೀಸಿಯ (ಡೆಡ್‍ಬನ್ರ್ಟ್ ಮೆಗ್ನೀಸಿಯ) ಎಂದು ಕರೆಯುತ್ತಾರೆ. ಈ ವಸ್ತುಗಳ ತಯಾರಿಕೆಗೆ ಗಣಿಯಿಂದ ಪಡೆದ, ಸ್ವಾಭಾವಿಕ ಸ್ಥಿತಿಯಲ್ಲಿರುವ ಮ್ಯಾಗ್ನಸೈಟ್ ಒಂದೇ ಮೂಲವಲ್ಲ. ಇವನ್ನು ಡಾಲೊಮೈಟ್ [ಅಚಿ(ಒg)ಅಔ3],  ಬ್ರೂಸೈಟ್ [ಒg(ಔಊ)2]  ಮತ್ತು ಕಡಲ ನೀರಿನಿಂದಲೂ ತಯಾರಿಸಬಹುದು. ಅತಿಶುದ್ಧ ಮೆಗ್ನಿಸಿಯಮ್ಮನ್ನು ಸುಮಾರು 2,5000ಅ ಉಷ್ಣತೆಯಲ್ಲಿ ಕಾಸಿದಾಗ, ಅದು ಕರಗಿರುವ ಲೋಹ ದ್ರವಗಳ ರಾಸಾಯನಿಕ ಕ್ರಿಯೆಗಳನ್ನು ತಡೆಯಬಲ್ಲ, ಸ್ಫಟಿಕೀಕರಿಸಿದ ಬಿಳಿಯ ವಸ್ತುವಾಗಿ ಒಂದುಗೂಡುತ್ತದೆ.

ಉಪಯೋಗಗಳು: 1. ಕಾವಿಟ್ಟಿಗೆ ಅಥವಾ ಉಷ್ಣನಿರೋಧಕ ಇಟ್ಟಿಗೆಗಳ ತಯಾರಿಕೆ. 2. ಸೋರೆಲ್ ಎಂಬ ವಿಶೇಷ ಸಿಮೆಂಟ್ ಉತ್ಪಾದನೆ, 3. ಮೆಗ್ನೀಸಿಯಮ್ ಲೋಹದ ಉದ್ಧರಣೆ ಮತ್ತು 4. ಮೆಗ್ನೀಸಿಯಮ್ ಲವಣಗಳ ತಯಾರಿಕೆ. ಸಂಪೂರ್ಣವಾಗಿ ಸುಟ್ಟ ರೂಪದಲ್ಲಿ, ಮ್ಯಾಗ್ನಸೈಟ್ ಹೆಚ್ಚು ಕಡಿಮೆ ಪೂರ್ತಿಯಾಗಿ, ಅಗ್ನಿನಿರೋಧಕ ವಸ್ತುವಾಗಿ ಬಳಕೆಯಾಗುತ್ತದೆ. ಇದಲ್ಲದೆ ಇನ್ನೂ ಹಲವು ಲೋಹ ತಯಾರಿಕೆಗಳಲ್ಲಿಯೂ ಇದರ ಉಪಯೋಗ ಉಂಟು. ಮ್ಯಾಗ್ನಸೈಟನ್ನು ಕಾಗದ ಕೈಗಾರಿಕೆ, ಘರ್ಷಕವಸ್ತುಗಳ ತಯಾರಿಕೆ, ಕಲ್ನಾರು ಉತ್ಪನ್ನಗಳು, ಬ್ಯಾಟರಿ, ಬಣ್ಣಗಳು, ಗಾಜು, ಎಲೆಕ್ರೋಡುಗಳ ತಯಾರಿಕೆ ಇತ್ಯಾದಿಗಳಲ್ಲಿ ಬಳಸುತ್ತಾರೆ. ಮೆಗ್ನೀಸಿಯಮ್ ಲವಣಗಳ ಉತ್ಪಾದನೆಯಲ್ಲೂ ಮ್ಯಾಗ್ನಸೈಟನ್ನು ಹೇರಳವಾಗಿ ಬಳಸುವುದಿದೆ.
	(ಎಮ್.ಎಸ್.ಪಿ)